ಒಡಂಬಡಿಕೆಗಳು ಹಳೆಯ ಮತ್ತು ಹೊಸ

	ಕ್ರಿಸ್ತವೇದವಾದ ಬೈಬಲಿನ ಮುಖ್ಯ ಭಾಗಗಳು (ಟೆಸ್ಟಮೆಂಟ್ಸ್-ಓಲ್ಡ್ ಅಂಡ್ ನ್ಯೂ). ಮೊದಲನೆಯದು ಹಳೆಯ ಒಡಂಬಡಿಕೆ, ಎರಡನೆಯದು ಹೊಸ ಒಡಂಬಡಿಕೆ. ಇವು ಕಾಲದಿಂದ ಕಾಲಕ್ಕೆ ದೇವರು ಅಪ್ಪಣೆ ಕೊಟ್ಟ ವಿಧಾಯಕ ವಾಕ್ಯ ರೂಪದಲ್ಲಿವೆ. ಕ್ರೈಸ್ತ ಮತದ ತಾರುಣ್ಯದಲ್ಲಿ ಹೊಸ ಒಡಂಬಡಿಕೆಗೆ ಮಾತ್ರ ಪವಿತ್ರವಾದುದೆಂಬ ಭಾವನೆ ಇತ್ತು. ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎರಡೂ ಪವಿತ್ರವಾದುವೇ ಎಂಬುದು ಈಗ ಕ್ರೈಸ್ತರಿಗೆ ಸಾಮಾನ್ಯವಾಗಿ ಒಪ್ಪಿಗೆಯಾಗಿರುವ ಅಭಿಪ್ರಾಯ. ಈ ಎರಡರಲ್ಲೂ ಪ್ರಕಟವಾಗಿರುವ ವಿಧಾಯಕ ವಾಕ್ಯಗಳು ಒಂದೇ ದೇವರ ವಾಕ್ಯಗಳು. ಆದರೂ ಈ ವಿಧಾಯಕ ವಾಕ್ಯಗಳಿಗೆ ಕೊಟ್ಟಿರುವ ಸ್ಥಾನಮಾನಗಳಲ್ಲಿ ವ್ಯತ್ಯಾಸವಿದೆ. ಹಳೆಯ ಒಡಂಬಡಿಕೆಯಲ್ಲಿರುವವು ಆಖೈರು ವಾಕ್ಯಗಳಲ್ಲ. ಹೊಸ ಒಡಂಬಡಿಕೆಯವು ಪೂರ್ಣವಾದುವು, ಅಂತಿಮವಾದುವು. ಮುಂದೆ ಉದ್ಧಾರಕನ ಅವತಾರವಾಗುವುದೆಂಬ ಭರವಸೆಯ ಮಾತುಗಳು ಹಳೆಯ ಒಡಂಬಡಿಕೆಯ ಉದ್ದಕ್ಕೂ ಬಂದಿವೆ. ಆ ಉದ್ಧಾರಕನೇ ಯೇಸು ಕ್ರಿಸ್ತ. ಅವನದು ಹಳೆಯ ಒಡಂಬಡಿಕೆಯ ಪ್ರವಾದಿಗಳ ದರ್ಜೆಗಿಂತ ಮೇಲಿನದು. ಪ್ರವಾದಿಗಳು ದೇವಪುತ್ರರಲ್ಲ. ಯೇಸುವಾದರೋ ಸಾಕ್ಷಾತ್ ದೇವಪುತ್ರ, ದೇವರೇ ಸಾಕ್ಷಾತ್ತಾಗಿ ಕ್ರೈಸ್ತನ ರೂಪದಲ್ಲಿ ಬಂದು ಜನತೆ ದೇವರಾಜ್ಯವನ್ನು ಸೇರುವ ಮಾರ್ಗವನ್ನು ತೋರಿಸಿರುತ್ತಾನೆ. ಯೇಸು ಕ್ರಿಸ್ತನ ಮುಖದಿಂದ ಹೊರಬಿದ್ದ ವಿಧಾಯಕ ವಾಕ್ಯಗಳು ಅಂತಿಮ ಸಂದೇಶದ ವಾಕ್ಯಗಳು. ಇವು ಹೊಸ ಒಡಂಬಡಿಕೆಯಲ್ಲಿವೆ.

	ಮೊಟ್ಟ ಮೊದಲಿಗೆ ಒಪ್ಪಂದದ ಮಾತು ಕಾಣಿಸಿಕೊಳ್ಳುವುದು ಹಳೆಯ ಒಡಂಬಡಿಕೆಯ ಮೊದಲ ಭಾಗವಾದ ಜೆನಿಸಿಸ್ಸಿನಲ್ಲಿ. ಅಲ್ಲಿ ದೇವರು ನೋವಾ ಮತ್ತು ಅವನ ಮಕ್ಕಳಿಗೆ ಹೇಳಿದ ವಾಕ್ಯಗಳು ಇವು; ಇಗೋ, ನಾನು ನನ್ನ ಮತ್ತು ನಿನ್ನ ಮಕ್ಕಳೊಡನೆ ಮತ್ತು ನಿನ್ನ ಸಂತತಿಯೊಡನೆ, ನಿನ್ನ ಜೊತೆಯಲ್ಲಿರುವ ಎಲ್ಲ ಪ್ರಾಣಿಗಳು ಅಂದರೆ ಪಕ್ಷಿಗಳು, ದನಗಳು ಮತ್ತು ಭೂಮಿಯ ಮೇಲಿನ ಎಲ್ಲ ಪ್ರಾಣಿಗಳು ಈ ಎಲ್ಲರೊಡನೆ ನನ್ನ ಒಪ್ಪಂದವನ್ನು ಸ್ಥಾಪಿಸುತ್ತೇನೆ. ನನಗೂ ಮತ್ತು ಈ ಭೂಮಿಯ ಮೇಲಿರುವ ಎಲ್ಲದಕ್ಕೂ ಆದ ಈ ಒಪ್ಪಂದದ ಕುರುಹಾಗಿ ನಾನು ಮೋಡದಲ್ಲಿ ನನ್ನ ಬಿಲ್ಲನ್ನು ನೆಟ್ಟಿರುತ್ತೇನೆ.

	ದೇವರು ಏಬ್ರಹಾಮನೊಡನೆ ಮಾಡಿಕೊಂಡ ಒಪ್ಪಂದ ಎರಡನೆಯದು. ಇದು ಜೆನಿಸಿಸ್ಸಿನ ಹದಿನೇಳನೆಯ ಅಧ್ಯಾಯದಲ್ಲಿ ಉಲ್ಲೇಖಿತವಾಗಿದೆ. ಏಬ್ರಮ್‍ಗೆ ತೊಂಬತ್ತೊಂಬತ್ತು ವಯಸ್ಸಾದಾಗ ಅವನಿಗೆ ದೇವರು ಕಾಣಿಸಿಕೊಂಡ. ದೇವರ ಮುಂದೆ ಅಡ್ಡಬಿದ್ದಾಗ ದೇವರು ತನ್ನ ಒಪ್ಪಂದವನ್ನು ಅವನಿಗೆ ಹೇಳಿದ: ನೀನು ಅನೇಕ ಜನಾಂಗಗಳ ತಂದೆಯಾಗುವೆ. ಇನ್ನೂ ಮುಂದೆ ನಿನ್ನ ಹೆಸರು ಏಬ್ರಹಾಮ್-ಏಬ್ರಮ್ ಅಲ್ಲ. ಕ್ಯಾನನ್ ಪ್ರದೇಶವನ್ನು ನಿನ್ನ ಮತ್ತು ನಿನ್ನ ಪೀಳಿಗೆಯವರು ಸರ್ವಕಾಲಕ್ಕೂ ಅನುಭವಿಸುವಂತೆ ಒಪ್ಪಿಸಿರುತ್ತೇನೆ. ಈ ಒಡಂಬಡಿಕೆಯ ಗುರುತಾಗಿ ಹುಟ್ಟಿದ ಮಕ್ಕಳಿಗೆಲ್ಲರಿಗೂ ನೀನು ಹಣ ಕೊಟ್ಟು ಕೊಂಡವರಿಗೂ ನೀನು ಪರಿವರ್ತನವೇರ್ಪಡಿಸಬೇಕು. 

	ಎಕ್ಸೋಡಸ್ಸಿನ ಹತ್ತೊಂಬತ್ತರಿಂದ ಇಪ್ಪತ್ತನಾಲ್ಕನೆಯ ಅಧ್ಯಾಯದವರೆಗಿನವುಗಳಲ್ಲಿ ಹೇಳಿರುವಂತೆ ಪ್ರಭು ಮೋಸೆಯೊಡನೆ ಮಾಡಿಕೊಂಡ ಒಪ್ಪಂದ ಮೂರನೆಯದು. ಇದರ ಇಪ್ಪತ್ತನೆಯ ಅಧ್ಯಾಯದಲ್ಲಿ ಪ್ರಭುವಿನ ಹತ್ತು ಆಜ್ಞೆಗಳು ವರ್ಣಿತವಾಗಿವೆ. ಈ ಒಪ್ಪಂದ ಹಿಂದಿನ ಒಪ್ಪಂದಗಳಿಗಿಂತ ಹೆಚ್ಚು ವಿಸ್ತಾರವಾಗಿದೆ.

	ಜೆರೀಮಿಯಾದ ಮೂವತ್ತೊಂದರಿಂದ ಮೂವತ್ತನಾಲ್ಕನೆಯ ಅಧ್ಯಾಯಗಳಲ್ಲಿ ಹಳೆಯ ಒಡಂಬಡಿಕೆಗೆ ಹೊಸ ವಿವರಣೆಯನ್ನು ಕೊಟ್ಟು ಅದನ್ನು ಮುಂದೆ ಬರಲಿರುವ ಹೊಸ ಒಡಂಬಡಿಕೆ ಎಂದು ಕರೆದಿದೆ. ಈ ಹೊಸ ಒಡಂಬಡಿಕೆಯನ್ನು ಇಸ್ರೇಲ್ ಮನೆತನದವರೊಡನೆ ಮುಂದಿನ ಕಾಲದಲ್ಲಿ ಏರ್ಪಡಿಸುವುದಾಗಿಯೂ ಆಗ ತನ್ನ ನಿಯಮವನ್ನು ಅವರ ಹೃದಯದೊಳಗೆ ಬರೆಯುವುದಾಗಿಯೂ ಪ್ರಭು ಹೇಳಿರುತ್ತಾನೆ.

	ಯೇಸು ಕ್ರಿಸ್ತ ಏರ್ಪಡಿಸಿದ ಹೊಸ ಒಡಂಬಡಿಕೆ ಹಳೆಯ ಒಡಂಬಡಿಕೆಯ ಪುನಃಸ್ಥಾಪನೆ. ಅದು ಪ್ರಭುವಿಗೂ ಭಕ್ತನಿಗೂ ಆಂತರಿಕ ಸಂಬಂಧವನ್ನು ಏರ್ಪಡಿಸುತ್ತದೆ. ಕ್ರಿಸ್ತನ ಜೀವನ ಮತ್ತು ಮರಣವನ್ನು ಈ ಹೊಸ ಒಡಂಬಡಿಕೆಯ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕು. ಮಾನವ ದೇವರಾಜ್ಯವನ್ನು ತನ್ನ ಅಂತರಂಗದಲ್ಲೇ ಕಾಣಬಹುದು ಎಂಬುದೂ ಮಾನವನಿಗೂ ದೇವರಿಗೂ ಇರುವ ಸಂಬಂಧ ಪ್ರೀತಿಯದು ಎಂಬುದೂ ಅದರ ತಳಹದಿಯ ಭಾವನೆಗಳು. ನಿಬಂಧನೆ (ಹತ್ತು ಆಜ್ಞೆಗಳು) ಮೋಸೆಯ ಮೂಲಕ ಬಂದುದಾದರೆ, ಕಾರುಣ್ಯ ಮತ್ತು ಸತ್ಯ ಕ್ರೈಸ್ತನಿಂದ ಬಂದುವು (ಸೇಂಟ್ ಜಾನ್). ಹಿಂದೆ ಯೋಹಾನ ನೀರಿನಿಂದ ದೀಕ್ಷೆ ಕೊಟ್ಟರೆ ಈಗ ಕ್ರಿಸ್ತ ಪವಿತ್ರಾತ್ಮದಿಂದ ದೀಕ್ಷೆ ಕೊಡುತ್ತಾನೆ (ಸೇಂಟ್ ಜಾನ್). ಹಿಂದೆ ಪ್ರಭು ಪ್ರವಾದಿಗಳ ಮೂಲಕ ತನ್ನ ಸಂದೇಶವನ್ನು ಕೊಟ್ಟ. ಈಗ ಪ್ರಭು ದೇವಪುತ್ರನಾಗಿ ಅವತರಿಸಿ ಜನರ ಮಧ್ಯೆ ಬಾಳಿ ಅವರಿಗೆ ತನ್ನ ಸಂದೇಶವನ್ನು ತಿಳಿಸಿರುತ್ತಾನೆ. ಅನೇಕ ಕಾಲದಿಂದ ಯೆಹೂದ್ಯರು ನಿರೀಕ್ಷಿಸಿದ್ದ ಉದ್ದಾರಕ ಯೇಸು ಕ್ರಿಸ್ತನೇ ಎಂದು ಯೇಹಾನ ಸಾರುತ್ತಾನೆ. ಯೇಸು ಪರ್ವತ ಶಿಖರದಿಂದ ಮಾಡಿದ ಉಪದೇಶ ಹೊಸ ಒಡಂಬಡಿಕೆಯ ಸಾರ. ಪ್ರಭುಭೋಜನ ಹೊಸ ಒಪ್ಪಂದದ ಸಂಸ್ಕಾರ. ಈ ಸಂಸ್ಕಾರದಲ್ಲಿ ದ್ರಾಕ್ಷಾರಸ ಯೇಸುವಿನ ಪರಿತಾಪ ಮತ್ತು ಅವನ ರಕ್ತ ಹೊಸ ಒಪ್ಪಂದದ ಸಂಕೇತ. ಅನೇಕರಿಗಾಗಿ ಬಸಿದ ರಕ್ತ ನನ್ನ ಹೊಸ ಒಡಂಬಡಿಕೆಯ ಸಂಕೇತ-ಎಂಬ ಯೇಸುವಿನ ಹೇಳಿಕೆ ಸೇಂಟ್ ಮಾರ್ಕ್ ಮತ್ತು ಕೊರಿಂಥಿಯನ್ಸ್ ಎಂಬ ಹೊಸ ಒಡಂಬಡಿಕೆಯ ಪುಸ್ತಕಗಳಲ್ಲಿ ಉಲ್ಲೇಖಿತವಾಗಿದೆ.
	(ನೋಡಿ- ಬೈಬಲ್)									
(ಜಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ